ಕೊಡವ ಜನಾಂಗದವರನ್ನು ಜಾತಿಜನಗಣತಿಯ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಕಲಂ ಗಳೆರಡರಲ್ಲೂ “ಕೊಡವ” ಎಂದು ದಾಖಲಿಸಲು ಅಖಿಲ ಕೊಡವ ಸಮಾಜದ ಮನವಿ

ವಿರಾಜಪೇಟೆ:
ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ರಾಜ್ಯದ ಸಮಗ್ರ ಜನತೆಯ ಜಾತಿ ಜನಗಣತಿ ನಡೆಯಲಿದ್ದು ಕೊಡವ ಜನಾಂಗದವರು ತಪ್ಪದೆ ತಮ್ಮ "ಧರ್ಮ" ಮತ್ತು "ಜಾತಿ" ಕಲಂಗಳೆರಡರಲ್ಲೂ "ಕೊಡವ" ಎಂದು ದಾಖಲಿಸುವಂತೆ ಮತ್ತು ತಮ್ಮ ಇತರ ಮಾಹಿತಿಗಳನ್ನು ಗಣತಿದಾರರು ಮನೆಗೆ ಭೇಟಿ ನೀಡಿದಾಗ ಯಾವುದೇ ತಪ್ಪಿಲ್ಲದೆ ಸ್ಪಷ್ಟವಾಗಿ ನೀಡಿ ಸಹಕರಿಸುವಂತೆ ದೇಶತಕ್ಕರು ಹಾಗು ಅಖಿಲ ಕೊಡವ ಸಮಾಜದ ಅಧ್ಯಕ್ಷರು ಮತ್ತು ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಭಕ್ತಜನಸಂಘದ ಅಧ್ಯಕ್ಷರು ಆಗಿರುವ ಶ್ರೀ ಪರದಂಡ ಸುಬ್ರಮಣಿ ಕಾವೇರಪ್ಪನವರು ಕೊಡವ ಜನತೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ, ಕೊಡವ ಜನಾಂಗದ ಪರವಾಗಿ ಮಾತೃ ಸಂಸ್ಥೆಯಾದ ಅಖಿಲ ಕೊಡವ ಸಮಾಜದ ನಿಲುವನ್ನು ಸ್ಪಷ್ಟಪಡಿಸಿ, ಸ್ವಾತಂತ್ರ್ಯ ಪೂರ್ವದಲ್ಲಿ ಕೊಡವ ಜನಾಂಗ ತಮ್ಮ ಮತ/ಧರ್ಮ ಮತ್ತು ಜಾತಿಯನ್ನು "ಕೊಡವರು" ಎಂದೇ ನಮೂದಿಸುತ್ತಿದ್ದುದನ್ನು ಸ್ಮರಿಸುತ್ತಾ, ಸ್ವಾತಂತ್ರ್ಯೋತ್ತರದಲ್ಲಿ ಜನಾಂಗದ ಅರಿವಿಗೆ ಬಾರದಂತೆ ಕಾಣದ ಕೈಗಳು ಷಡ್ಯಂತ್ರ ಮಾಡಿ ಕೊಡವರ ಧರ್ಮವನ್ನು ಹಿಂದು ಎಂದು ಬದಲಾಯಿಸಿ ಕೊಡವ ಜನಾಂಗದವರಿಗೆ ಅತ್ಯಂತ ನೋವುಂಟುಮಾಡಿದ್ದನ್ನು ಸರಿಪಡಿಸಿಕೊಳ್ಳಲು ಈಗ ಸಕಾಲವೆನಿಸಿದೆ ಎಂದು ತಿಳಿಸಿದ್ದಾರೆ.
ಕೊಡವರು ಇತ್ತೀಚಿನ ಕೆಲವು ಶತಮಾನಗಳಲ್ಲಿ ಅವರ ಸುತ್ತಮುತ್ತ ಇರುವ ಜನರ ಮತ್ತು ಹಿಂದೂಸ್ಥಾನದ ಧರ್ಮ ನೀತಿಗಳಿಂದ ಪ್ರಭಾವಿತರಾದರೂ ತಮ್ಮ ವಿಶೇಷಪಟ್ಟ ಸಂಸ್ಕೃತಿ ಸಂಪ್ರದಾಯಗಳನ್ನು ಕಾಪಾಡಿಕೊಂಡೇ ಬಂದಿರುವರು. ಕೊಡವರ ಮದುವೆ ಸಮಾರಂಭಗಳಲ್ಲಿ ಪುರೋಹಿತರು ನಡೆಸುವ ಸಪ್ತಪದಿ, ತಾಳಿ ಕಟ್ಟುವ ಸಂಪ್ರದಾಯಗಳು ಇಲ್ಲದಿದ್ದು ತಮ್ಮ ಪೂರ್ವಜರನ್ನು "ಗುರುಕಾರೋಣ"ರೆಂದು ಆರಾಧಿಸುವ ಸಂಪ್ರದಾಯಕ್ಕೆ ಬದ್ಧರಾಗಿರುವ ವಿಶಿಷ್ಟ/ವಿಭಿನ್ನ ಜನಾಂಗದವರಾಗಿರುತ್ತಾರೆ.
ಕೊಡವರು ಉಳಿಸಿ ಬೆಳೆಸಿರುವ ವಿವೇಚನಾಶೀಲ, ತರ್ಕಬದ್ಧ, ಪ್ರಕೃತಿಯನ್ನು ಪೂಜನೀಯವಾಗಿ ಕಾಣುತ್ತಾ ಬಂದಿರುವ ಆಚಾರ-ವಿಚಾರ, ಕಟ್ಟು-ಕಟ್ಟಳೆ, ಭಾಷೆ-ಉಡುಪು, ಸಾಂಸ್ಕೃತಿಕವಾಗಿ ಮಾದರಿಯ ಸಂಪ್ರದಾಯಕ್ಕೆ ಪೂರಕವಾಗಿರುವ ಪದ್ಧತಿ-ನಡೆ, ಬೇರೆ ಯಾವುದೇ ಜನಾಂಗದಲ್ಲಿ ಕಾಣದ ವಿಶೇಷತೆಯನ್ನು ಹೊಂದಿರುವುದಲ್ಲದೆ, ಕೊಡವರು ಜಗತ್ತಿನಲ್ಲಿ ತಮ್ಮದೇ ಆದ ಧಾರ್ಮಿಕ ನಲೆಗಟ್ಟಿನಲ್ಲಿ ಬಾಳಿ ಬದುಕುತ್ತಿರುವ ಒಂದು ವಿಶೇಷ ಬುಡಕಟ್ಟು ಜನಾಂಗವೆಂದು ಗುರುತಿಸಲು ಬೇರೆ ಯಾವುದೇ ದೃಢೀಕರಣದ ಅವಶ್ಯಕತೆ ಇಲ್ಲ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಡವ ಜನಾಂಗದ ಸಮಸ್ತರು ಈ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಜನಗಣತಿಯಲ್ಲಿ ಭಾಗವಹಿಸಿ ಸ್ಪಷ್ಟ ಮಾಹಿತಿ ನೀಡಿ ಸಹಕರಿಸಬೇಕೆಂದು ಕೋರಿದ್ದಾರೆ.
ಆದುದರಿಂದ, ರಾಜ್ಯ ಸರಕಾರ, ಕೊಡವ ಜನಾಂಗದ ಈ ಬೇಡಿಕೆ/ಅನಿವಾರ್ಯತೆ ಯನ್ನು ಗಮನದಲ್ಲಿರಿಸಿಕೊಂಡು ಜನಗಣತಿ ಅರ್ಜಿಯ ವಿನ್ಯಾಸದಲ್ಲಿ,/ಸಾಫ್ಟ್ವೇರ್ ಕಂಪ್ಯೂಟರೀಕರಣಗೊಳ್ಳುವ ಅರ್ಜಿಯ ವಿನ್ಯಾಸದಲ್ಲಿ ಸೂಕ್ತ ಮಾರ್ಪಾಡು ಮಾಡಲು ವಿನಂತಿಸಲಾಗಿದೆ.
Latest Articles
- ಕೊಡವ ಜನಾಂಗದವರನ್ನು ಜಾತಿಜನಗಣತಿಯ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಕಲಂ ಗಳೆರಡರಲ್ಲೂ “ಕೊಡವ” ಎಂದು ದಾಖಲಿಸಲು ಅಖಿಲ ಕೊಡವ ಸಮಾಜದ ಮನವಿ
- ಕೊಡವ ಜನಾಂಗ ಮತ್ತು ಕೊಡವ ಭಾಷಿಕ 21 ಸಮುದಾಯಗಳು ಸೇರಿದಂತೆ ಸಂಸ್ಕೃತಿಯ ಸಮಗ್ರ ಅಸ್ತಿತ್ವದ ಮೇಲೆ ನಡೆಯುತ್ತಿರುವ ಜನಾಂಗೀಯ ತಾರತಮ್ಯ, ದಬ್ಬಾಳಿಕೆ ಹಾಗು ಸಂವಿಧಾನಾತ್ಮಕ ಹಕ್ಕು ಗಳನ್ನು ಕಸಿಯುವ ಹಾಗು ತಡೆಯುವ ಯತ್ನದ ಕುರಿತಂತೆ…. ಪತ್ರದ ಮೂಲಕ ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಮನವಿ
- ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸೃತಿಯ ಭದ್ರತೆಗಾಗಿ ಮತ್ತು ಸಂವಿಧಾನಬದ್ದವಾಗಿ ಹಕ್ಕು ಮತ್ತು ಸೌಲಭ್ಯಗಳ ಭೇಡಿಕೆಯನ್ನು ಮುಂದಿಟ್ಟು ಕುಟ್ಟದಿಂದ ಮಡಿಕೇರಿಗೆ ನಡೆಯುವ ಪಾದಯಾತ್ರೆಯ ಕುರಿತು…
- ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವ ಕಟ್ಟೆಮಾಡು ಶ್ರೀ ಮಾದೇಶ್ವರ (ಮಹಾ ಮೃತ್ಯುಂಜಯ) ದೇವಾಲಯದ ಪ್ರಕರಣ
- ಕಟ್ಟೆಮಾಡು ಶ್ರೀ ಮಾದೇವ (ಮಹಾ ಮೃತ್ಯುಂಜಯ ಮಾದೇಶ್ವರ) ದೇವಸ್ಥಾನ- ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರವೇಶಕ್ಕೆ ಅನಗತ್ಯ ಅಡಚಣೆಯ ಬಗ್ಗೆ ಜಿಲ್ಲಾಡಳಿತಕ್ಕೆ ವಿಚಾರ ಮಂಡನೆ.






