Uncategorized

ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವ ಕಟ್ಟೆಮಾಡು ಶ್ರೀ ಮಾದೇಶ್ವರ (ಮಹಾ ಮೃತ್ಯುಂಜಯ) ದೇವಾಲಯದ ಪ್ರಕರಣ

ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವ ಕಟ್ಟೆಮಾಡು ಶ್ರೀ ಮಾದೇಶ್ವರ (ಮಹಾ ಮೃತ್ಯುಂಜಯ) ದೇವಾಲಯದ ಪ್ರಕರಣ

ಅಖಿಲ ಕೊಡವ ಸಮಾಜದ ಪತ್ರಿಕಾ ಘೋಷ್ಠಿ/ಪ್ರಕಟಣೆ

ಸ್ಥಳ: ಪ್ರೆಸ್ ಕ್ಲಬ್ ಮಡಿಕೇರಿ
ದಿನಾಂಕ: 18-01-2025

ವಿಷಯ: ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವ ಕಟ್ಟೆಮಾಡು
ಶ್ರೀ ಮಾದೇಶ್ವರ (ಮಹಾ ಮೃತ್ಯುಂಜಯ) ದೇವಾಲಯದ ಪ್ರಕರಣ

ತಾ. 27-12-2025 ರಂದು ಸಂಜೆ ಶ್ರೀ ಮಾದೇಶ್ವರ (ಮಹಾ ಮೃತ್ಯುಂಜಯ) ದೇವಾಲಯದ ಎದುರು ಪ್ರಚೋದನೆ ಮಾಡಿದ ಕಾಂಗಿ ಸತೀಶ (ಅಲಿಯಾಸ್ ಅಶ್ವಿನ್) ಮತ್ತು ಹಲ್ಲೆ ಮಾಡಿದವರಾದ ಬಿದ್ರುಪಣೆ ಜಿನ್ನು (ಅಲಿಯಾಸ್ ಗಿರೀಶ್) ಮತ್ತು ಸಂಗಡಿಗರಿಂದ ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಕೆಲವರ ಮೇಲೆ ಕುಪ್ಯ ಚಾಲೆ (ಕೊಡವ ಸಾಂಪ್ರದಾಯಿಕ ಉಡುಗೆ) ಯೊಂದಿಗೆ ಪ್ರವೇಶದ ವಿಷಯದಲ್ಲಿ ನಡೆದ ಹಲ್ಲೆ, ತದನಂತರ ಸುಮಾರು ಇಂದಿಗೆ 22 ದಿವಸ ಕಳೆದರೂ ಜಿಲ್ಲಾಡಳಿತ ಆರೋಪಿತರ ಮೇಲೆ ಯಾವುದೇ ಆರೋಪ ಪಟ್ಟಿ / ಸೂಕ್ತ ಕಾನೂನು ಕ್ರಮ ಧಾಖಲಿಸದಿರುವುದು ಕೊಡವ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವುದು.

ಇಷ್ಟೆಲ್ಲ ರಾದ್ಧಾಂತಕ್ಕೆ ಮೇಲೆ ಹೆಸರಿಸಿದ ಕಾರಣ ಕರ್ತರಾದವರ ಮೇಲೆ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದಿರುವುದರಿಂದ ತದನಂತರದಲ್ಲಿ ಆರೋಪ ಪ್ರತ್ಯಾರೋಪ ಗಳು / ಕೆಸರೆರಚಾಟ ಎರದೂ ಜನಾಂಗಗಳ ಕೆಲವು ವ್ಯಕ್ತಿಗಳಿಂದ ನಡೆದಿದೆ. ದೇವಸ್ಥಾನದಲ್ಲಿ ಆದಂತಹ ಈ ಅಹಿತಕರ ಘಟನೆಯಿಂದ ಮನನೊಂದು ಕೆಲವು ವ್ಯಕ್ತಿಗಳು ಖಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಯಿಸಿರುವುದು ಕಂಡು ಬಂದಿದೆ.

ಕೊಡವರಿಗೆ ಎಲ್ಲಾ ಜನಾಂಗದವರ ಮೇಲೆ ಗೌರವವಿದೆ. ಹಲವು ದೇವಸ್ಥಾನಗಳಲ್ಲಿ ಭಂಡಾರ ತಕ್ಕರಾಗಿ ಅರೆಭಾಷಿಕ ಜನಾಂಗದವರು ಕೊಡವ ಜನಾಂಗದವರೊಡಗೂಡಿ ಶಾಂತಿಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊಡಗಿನ ಜನಜೀವನದಲ್ಲಿ ಅವರು ಅವಿಭಾಜ್ಯ ಅಂಗವಾಗಿದ್ದಾರೆ. ಒಬ್ಬರಿಬ್ಬರು ಮಾಡಿದ ತಪ್ಪಿಗೆ ಇಡೀ ಜನಾಂಗವನ್ನು ಅವಹೇಳನ ಮಾಡುವದು ಸರಿಯಲ್ಲ ಮತ್ತು ಸಮಂಜಸವೂ ಅಲ್ಲ.

ಒಂದು ಜನಾಂಗದವರು ಪ್ರತಿಭಟನೆಗಳನ್ನು ಶಾಂತಿಯುತವಾಗಿ ನಡೆಸಿದರೂ ಅದಕ್ಕೆ ಪ್ರತ್ಯುತ್ತರವಾಗಿ ತಕ್ಕಂತೆ ಇನ್ನೊಂದು ಸಮುದಾಯ ಪ್ರತಿಭಟನೆ ನಡೆಸುವುದು ಸರ್ವಸಾಮಾನ್ಯ ಹಾಗೂ ಸ್ವಾಭಾವಿಕ. ಇದು ಜಿಲ್ಲೆಯ ಸ್ವಾಸ್ತ್ಯದ ದೃಷ್ಟಿಯಿಂದ ಆರೋಗ್ಯಕರವಲ್ಲ. ಸ್ವಾಭಾವಿಕವಾಗಿಯೇ ಸದ್ಯದಲ್ಲಿಯೇ ಕೊಡವ ಮತ್ತು ಕೊಡವ ಭಾಷಿಕ ಜನಾಂಗದವರು ಮತ್ತು ಕೊಡವ ಭಾಷೆಯ ಅಭಿಮಾನಿಗಳು ಬ್ರಹತ್ ಪ್ರತಿಭಟನೆ ಆಯೋಜಿಸುವುದಕ್ಕೆ ತಯಾರಿ ನಡೆಸುವರು. ಇದರಿಂದ ಯಾರಿಗೂ ಲಾಭವಿಲ್ಲ.

ಆದುದರಿಂದ ಕೊಡಗಿನ ಜನಪ್ರತಿನಿಧಿಗಳು ಜಿಲ್ಲಾಡಳಿತದೊಂದಿಗೆ ಸೇರಿ ಎರಡು ಜನಾಂಗದ ಪ್ರಮುಖರನ್ನು ಸೇರಿಸಿ ಶಾಂತಿ ಸಂಧಾನ ನಡೆಸುವುದಕ್ಕೆ ಅಖಿಲ ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡುವುದು. 

ಅಧ್ಯಕ್ಷರು ಮತ್ತು ಕಾರ್ಯದರ್ಶಿ
ಅಖಿಲ ಕೊಡವ ಸಮಾಜ

Latest Articles