Uncategorized

2024 ಡಿಸೆಂಬರ್ 15 ರಂದು ಹುಣ್ಣಿಮೆಯಾದರೂ “ಪುತ್ತರಿ”ಆಗದು ಯಾಕೆ?

2024 ಡಿಸೆಂಬರ್ 15 ರಂದು ಹುಣ್ಣಿಮೆಯಾದರೂ “ಪುತ್ತರಿ”ಆಗದು ಯಾಕೆ?

ಕೊಡಗಿನ ಪ್ರಮುಖ ಭತ್ತದ ಬೆಳೆಯ ಸುಗ್ಗಿ ಹಬ್ಬ, ಅದರಲ್ಲೂ ಕೊಡವರ, ಕೊಡವ ಭಾ಼ಷಿಕರ, ಅಷ್ಟೇ ಏಕೆ ಕೊಡಗಿನ ಎಲ್ಲಾ ಸಮುದಾಯಗಳೂ ವಿಶೇಷವಾಗಿ ಎದುರು ನೋಡುವ, ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡು ಮನೆ ತುಂಬಿಸಿಕೊಳ್ಳುವ ಸಂಭ್ರಮದ ಸಂಕೇತವಾದ ಹಬ್ಬ “ಪುತ್ತರಿ”. ಹಬ್ಬಕ್ಕೆ 3 ದಿನವಿರುವಾಗಲೇ “ಮಂದ್ ಮಾನಿ”ಗಳೆಲ್ಲಾ ಕಳೆಗಟ್ಟಿ ಕೊಡಗಿನಲ್ಲೆಡೆ, ಕೋಲಾಟ, ಆಟೋಟಗಳ ಸಂಭ್ರ ಮಿಸುವುದು ಪರಂಪರೆ.

ಈ ಬಾರಿ ತಾರೀಖು 29-11-2024 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಬೆಳಿಗ್ಗೆ ಸರಿಯಾಗಿ 10:30 ಘಂಟೆಗೆ ಕಲಾಡ್ಚ ಹಬ್ಬದ ದಿನವನ್ನು, ಪುತ್ತರಿಯ ದಿನವನ್ನು,, ಹಾಗೆಯೇ ಪುತ್ತರಿ ಕದಿರು ತೆಗೆಯುವ ಶುಭ ಘಳಿಗೆಯ ಮಹೂರ್ತಪಟ್ಟಿ ನಿಶ್ಚಯಿಸಲಾಗಿದೆ.

ಪುತ್ತರಿ ನಮ್ಮೆಯ ದಿನವನ್ನು ಪುಷ್ಠೀಕರಿಸುವ ಆಧ್ಯಾತ್ಮಿಕ ಮಜಲುಗಳಾದ ಶಾಸ್ತ್ರ/ರೋಹಿಣಿ ನಕ್ಷತ್ರದ ಶುಭಲಗ್ನಗಳೇನೇ ಇದ್ದರೂ, ನಮ್ಮ ಪೂರ್ವಿಕರು ಚಂದ್ರನ ಪಥದ ಬಗ್ಗೆ ನಿಗಾ ಇರಿಸಿ ಹುಣ್ಣಿಮೆಯ ಮುಹೂರ್ತ ಶುರುವಾಗುವ ಆದಿಪಾದದಲ್ಲಿಯೇ( waxing gibbous )ಕದಿರು ತೆಗೆಯುತ್ತಿದ್ದರು ಎಂಬುದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಚಂದಿರನು ಹುಣ್ಣಿಮೆಯ ಮುಹೂರ್ತಕ್ಕೆ ಕಾಲಿಡುತ್ತಿದ್ದಂತೆಯೇ ಪುತ್ತರಿಯ ಶುಭಮುಹೂರ್ತಕ್ಕೆ ನಮ್ಮ ಪೂರ್ವಿಕರು ಅಣಿಯಾಗಿ ಹುಣ್ಣಿಮೆಯ ಆದಿಪಾದ ದಲ್ಲಿಯೇ ಕದಿರು ತೆಗೆಯಲು ರೋಹಿಣಿ ನಕ್ಷತ್ರವೂ ಕೂಡಿ ಬರುವಂತೆ ನೋಡಿಕೊಳ್ಳುತ್ತಿದ್ದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಚಂದಿರನು ಹುಣ್ಣಿಮೆಯತ್ತ ವೃದ್ದಿಸುತ್ತಾ ಸಾಗುವಾಗಲೇ ಕದಿರು ತೆಗೆಯುವುದೇ ಹೊರತು ಹುಣ್ಣಿಮೆಯ ಮುಹೂರ್ತ ಮುಗಿದು ಅಮವಾಸ್ಯೆಯತ್ತ ಕ್ಷೀಣಿಸುತ್ತಾ ಸಾಗುವ ( waning gibbous) ಸಮಯದಲ್ಲಿ ಶುಭ ಕಾರ್ಯಗಳಿಗೆ ಅಡಿ ಇಡುತ್ತಿರಲಿಲ್ಲ.

ಹಾಗಾಗಿ ಡಿಸೆಂಬರ್ ದಿನಾಂಕ 14 ರಂದು ಮದ್ಯಾಹ್ನದ ನಂತರ ಸಂಜೆ 4:59 ಕ್ಕೆ ಶುರುವಾಗುವ ಹುಣ್ಣಿಮೆಯ ಮುಹೂರ್ತವು ( ಮಾರನೇ ದಿನ ತಾರೀಖು 15ರ ಮಧ್ಯಾಹ್ನ 2.30 ಕ್ಕೆ ಸಮಾಪ್ತಿ) ಅಂದಿನ ದಿನ ರಾತ್ರಿ ತನ್ನ ಪ್ರತಿಫಲನದ ಪೂರ್ಣಾಕೃತಿಗೆ ಬರದ ಹೊರತಾಗಿಯೂ ತನ್ನ ಹುಣ್ಣಿಮೆಯ ಮುಹೂರ್ತದ ಸಮಯದಲ್ಲಿಯೇ ಪ್ರಗತಿಯ ಪಥದಲ್ಲಿ ವೃದ್ದಿಯಾಗುತ್ತಲೇ ಸಾಗುವುದರಿಂದ ತನ್ನ ಪೂರ್ಣಾಕೃತಿಗೆ ಕೆಲವೇ ಘಂಟೆಗಳು ಬಾಕಿ ಇದ್ದರೂ “ಪುತ್ತರಿ”ಯ ಶುಭ ಮುಹೂರ್ತಕ್ಕೆ ಶುಭವೆಂದೂ, ಪ್ರಗತಿಯ ಪಥದಲ್ಲಿರುವ ಚಂದಿರನಾದುದರಿಂದ ( waxing gibbous)ರೈತರು ಬೆಳೆದ ಪೈರಿನ ಧಾನ್ಯಲಕ್ಷ್ಮೀಯನ್ನು ಮನೆಯೊಳಗೆ ತರಲು ಸರ್ವ ರೀತಿಯಲ್ಲೂ ಶುಭವೆಂದು ಅನಾದಿ ಕಾಲದಿಂದಲೂ ಪೂರ್ವಿಕರು ಅರ್ಥೈಸಿರುವುದಾಗಿದೆ. ಪಾಡಿ ದೇವಾಲಯದ ಪರಂಪರಾಗತ ಕಣಿಯರಾಗಿರುವ ಅಮ್ಮಂಗೇರಿ ಕುಟುಂಬದವರು ಕೃಷ್ಣಪಂಚಾಂಗ ಆಧರಿಸಿ “ರೋಹಿಣಿ ನಕ್ಷತ್ರದ” ಪ್ರಕಾರ ಡಿಸೆಂಬರ್ ತಾರೀಖು 14 ರ ಶನಿವಾರ ಬೆಳಗಿನ ಜಾವ 6:00 ರಿಂದ ಶುರುವಾಗುವ ರೋಹಿಣಿ ನಕ್ಷತ್ರವು ದಿನಪೂರ್ತಿ ಇದ್ದು ತಾರೀಖು 15 ರ ಬೆಳಗಿನ ಜಾವ 3.00 ಕ್ಕೆ ಕೊನೆಗೊಳ್ಳುತ್ತದೆ ಎಂದು ತಿಳಿಸಿದ ಪ್ರಕಾರ ತಾರೀಖು 14 ರ ರಾತ್ರಿ “ಪುತ್ತರಿ ನಮ್ಮೆ” ನಡೆಯುವುದು.

ಈ ಹಿನ್ನಲೆಯಲ್ಲಿ, ಈ ಬಾರಿ ಹುಣ್ಣಿಮೆಯ ಮುಹೂರ್ತ ಡಿಸೆಂಬರ್ ತಾರೀಖು 15 ರ ಮಧ್ಯಾಹ್ನ 2:33 ಕ್ಕೆ ಮುಗಿದು ಹೋಗುವುದರಿಂದ, ಆ ರಾತ್ರಿ ಚಂದಿರನು ಅಪ್ಯಾಯಮಾನವಾಗಿ/ಉಜ್ವಲ್ಯಮಾನವಾಗಿ ಕಂಡರೂ ಅವನು ಕೃಶನಾಗುವ ಪರಿಧಿಗೆ ಸೇರಿಬಿಡುವುದರಿಂದ (waning gibbous )ಹುಣ್ಣಿಮೆ ಎನಿಸದು ಅಲ್ಲದೆ ಕದಿರು ತೆಗೆಯುವ ಕಾರ್ಯಕ್ಕೆ ಸೂಕ್ತ ವಲ್ಲ, ಹಾಗೂ ವೃದ್ದಿಯಾಗದು ಎಂಬದು ಜನರ ನಂಬಿಕೆ.

ಕೊಡವ ಹಾಗೂ ಕೊಡವ ಭಾಷಿಕರಲ್ಲಿ ಶುಭ ಘಳಿಗೆ ನಿಶ್ಚಯಿಸುವುದರಲ್ಲಿ ನಮ್ಮ ಪೂರ್ವಿಕರು ಸೂರ್ಯೋದಯಕ್ಕೆ/ಚಂದ್ರೋದಯಕ್ಕೆ ವಿಶೇಷ ಸ್ಥಾನ ನೀಡಿದ್ದರು ಎಂಬುದಕ್ಕೆ ಪೂರ್ವಜರು ಹುಣ್ಣಿಮೆಯ ಚಂದ್ರೋದಯ ಕಾಲದಲ್ಲಿಯೇ ಶುಭ ಕಾರ್ಯ ಮಾಡುತ್ತಿದ್ದರೆಂಬುದಕ್ಕೆ ಹಾಗೂ ಅವರು ಸೂರ್ಯನ, ಚಂದ್ರನ ಪಥದ ಮೇಲೆ ಗಮನವಿಡುತ್ತಿದ್ದರು ಎಂಬುದಕ್ಕೆ ಇದು ನಿದರ್ಶನ .

ಅಲ್ಲದೆ, ಪೂರ್ಣಿಮೆಯ ರಾತ್ರಿ ಸಾಗರದ ಅಲೆಗಳ ರುದ್ರನರ್ತನ, ನಂತರದ ದಿನಗಳಲ್ಲಿ ಕಡಿಮೆಯಾಗುವುದು, ಅಂತೆಯೇ ಗುರುತ್ವಾಕರ್ಷಣೆಯ ನಿಯಮದಂತೆ ಅಂದಿನ ರಾತ್ರಿ ಸಸ್ಯಸಂಕುಲವೆಲ್ಲ ತನ್ನೊಳಗಿನ ದೃವವನ್ನೆಲ್ಲ , ಸಾರವನ್ನೆಲ್ಲ, ಮೇಲಕ್ಕೆ ಸೆಳೆದು ತಂದಿರಿಸಿ, ತನ್ನ ಎಲೆಗಳಲ್ಲಿ, ಕದಿರಿನ ಕಣ ಕಣದಲ್ಲಿ ಲೀನವಾಗಿರಿಸಿ ಆಗಸದತ್ತ ಮುಖ ಮಾಡಿರುವುದು ಕೂಡ ಕಟಾವಿನ ಶುಭ ಮುಹೂರ್ತ ಕೂಡಿಬರಲು ಕಾರಣವಿರಬಹುದು. ಇವೆಲ್ಲ ನಾವು ಪ್ರಕೃತಿಯ ಆರಾಧಕರೆಂಬುದಕ್ಕೆ, ಈ ಹಬ್ಬಗಳು ಪ್ರಗತಿಯ ಸಂಭ್ರಮದ, ಅಭಿವೃದ್ದಿಯ ಸಂಕೇತವಾಗಿರುವುದಲ್ಲದೆ ಒಂದಕ್ಕೊಂದು ಪೂರಕವಾಗಿರುವುದು ಸಾಕ್ಷಿ.

ಆದರೆ ಹಲವು ಸಂದರ್ಭಗ ಳಲ್ಲಿ, ಹುಣ್ಣಿಮೆಯ ಮುಹೂರ್ತವು ಬದಲಾಗಿ , ನಮಗೆ ಅನುಕೂಲವಾಗುವಂತೆ ಸಂಜೆ ಹೊತ್ತಿನಲ್ಲಿ ಪುತ್ತರಿಗೆ ಹುಣ್ಣಿಮೆಯ ಮುಹೂರ್ತದ ಆದಿಪಾದ ಸಿಗದೇ, ಹೋದಾಗ ಈ ಪ್ರಕೃತಿಯ ಉತ್ಕೃಷ್ಠ ವ್ಯವಸ್ಥೆಯಲ್ಲಿನ ಬದಲಾವಣೆಯು ನಮ್ಮ ನಿಲುಕಿಗೆ ಮೀರಿದ್ದಾಗಿರುವಾದರಿಂದ , ನಮ್ಮ ಸಂಜೇಗತ್ತಲಿನ ಆಚರಣೆಗೆ ಅವಕಾಶ ಆಗುವಂತೆ, ನಾವು ರೋಹಿಣಿ ನಕ್ಷತ್ರದ ಸಮಯಕ್ಕೆ ಸರಿಯಾಗಿ ಪುತ್ತರಿ ಆಚರಣೆ ಮಾಡುವ ಅನಿವಾರ್ಯತೆ ಬರಬಹುದು.....ಆದರೆ ಇದು ಅತ್ಯಂತ ವಿರಳ.

ಅದೇನೇ ಇದ್ದರೂ, ಅನ್ನದಾತ ಇಗ್ಗುತ್ತಪ್ಪನ, ಕೊಡಗಿನ ಪುತ್ತರಿ ಹಬ್ಬದ ಐತಿಹ್ಯದಂತೆ ಆದಿ ಸ್ಥಾನ ಮಲ್ಮದಲ್ಲಿ "ದೇಶಕಟ್ಟು' ಸಹ ಅಮವಾಸ್ಯೆಯ ಆಸುಪಾಸಿನಲ್ಲಿ ವಿಧಿಸಲ್ಪಟ್ಟು ಪುತ್ತರಿಗೆ ಒಂದು ದಿವಸ ಮುಂಚೆ ಅಥವಾ ಪುತ್ತರಿಯ ದಿನವೇ ಪೂರ್ವಾಹ್ನ ಹುಣ್ಣಿಮೆಯ ಮುಂಚೆ ಸಂಪನ್ನಗೊಳ್ಳುವಾಗ, ದೇವತಕ್ಕರು ತಮ್ಮ ಮಾತಿನಲ್ಲಿ ಚಂದ್ರನ ಈ ವಿವಿಧ ಆಕೃತಿಗೆ ಅನುಗುಣವಾಗಿ ತಾವು ದೇವಕಟ್ಟು ಹಾಕಿರುವುದನ್ನೂ ಹಾಗು ಅದರ ಪ್ರಾಮುಖ್ಯತೆಯನ್ನು ವಿವರಿಸಿ ಹೇಳುವುದು ವಾಡಿಕೆ.

ಈ ಬಾರಿಯ ಪುತ್ತರಿಯು....ಕೊಡಗಿನ ಪ್ರತೀ ಐನ್ ಮನೆಗಳಲ್ಲಿ, ಮನೆ, ಮನಗಳಲ್ಲಿ, ಹರುಷದ , ನೆಮ್ಮದಿಯ ವೃದ್ಧಿ ಸಮೃದ್ಧಿಯ ಬೆಳಕ ತರಲಿ, ಕೊಡಗಿನ ಜನರ ನಡುವಿನ ಸಾಮರಸ್ಯ, ವಿಶ್ವಾಸ ಪ್ರೀತಿಯು ಮತ್ತಷ್ಟು ವೃದ್ದಿಸಲಿ...

ಅಂತೆಯೆ... ಅಮ್ಮೆ ಹರಸಿದ ಈ ಮಣ್ಣಿನಲ್ಲಿ ಭತ್ತದ ಗದ್ದೆಗಳೆಲ್ಲ ಹಸಿರ ಜೀವಕಳೆ ಪಡೆದು, ಜೀವಜಲ, ಅಂತರ್ಜಲ ವೃದ್ಧಿಸಲಿ....

ಪರದಂಡ ಸುಬ್ರಮಣಿ ಕಾವೇರಿಯಪ್ಪ
ದೇಶ ತಕ್ಕ - ಅಧ್ಯಕ್ಷ
ಪಾಡಿ ಶ್ರೀ ಇಗ್ಗುತಪ್ಪ ಭಕ್ತಜನಸಂಘ ಹಾಗು ಅಖಿಲ ಕೊಡವ ಸಮಾಜ

Latest Articles